ಪ್ರಿಟೋರಿಯ
	ದಕ್ಷಿಣ ಆಫ್ರಿಕ ಗಣರಾಜ್ಯದ ಆಡಳಿತ ಕೇಂದ್ರ, ಟ್ರಾನ್ಸ್‍ವಾಲ್ ಪ್ರಾಂತ್ಯದ ರಾಜಧಾನಿ. ಮೆಗಲೆಸ್‍ಬರ್ಗ್ ಬೆಟ್ಟದ ಪಶ್ಚಿಮ ತಪ್ಪಲಲ್ಲಿ ಹರಿಯುವ ಎಪೀಸ್ ನದಿಯ ಎರಡೂ ದಂಡೆಗಳ ಮೇಲೆ ದ. ಅ. 250 45 ಮತ್ತು ಪೂ.ರೆ 280 10 ಮೇಲಿದೆ. ಬೃಹತ್ ನಗರ ಪ್ರದೇಶದ ಜನಸಂಖ್ಯೆ 5,61,703(1970). ನಗರದ ಜನಸಂಖ್ಯೆ 563,000(1979).

	ಪ್ರಿಟೋರಿಯವನ್ನು ಬೋಯರ್ ರಾಜಕಾರಣಿ ಆಂಡ್ರೀಸ್ ಪ್ರೆಟೂರಿಯಸ್‍ನ ಹೆಸರಿನಲ್ಲೆ ಅವನ ಮಗ ಮಾರ್ತಿನಸ್ ಪ್ರೆಟೂರಿಯಸ್ 1855ರಲ್ಲಿ ಸ್ಥಾಪಿಸಿದ. ಇದು 1860ರಲ್ಲಿ ಟ್ರಾನ್ಸ್‍ವಾಲ್ ಪ್ರಾಂತ್ಯದ ರಾಜಧಾನಿಯಾಯಿತು. ದಕ್ಷಿಣ ಆಫ್ರಿಕದ ಆಡಳಿತ ಕೇಂದ್ರವಾದ್ದು 1910ರಲ್ಲಿ. 1931ರಲ್ಲಿ ಇದಕ್ಕೆ ಪೌರಸಭೆಯ ಸ್ಥಾನ ದೊರಕಿತು. ಮುಂದೆ ಬ್ರಿಟನ್ನಿನ ಪ್ರಧಾನ ಮಂತ್ರಿಯಾದ ವಿನ್‍ಸ್ಟನ್ ಚರ್ಚಿಲ್‍ದಕ್ಷಿಣ ಯುದ್ಧದಲ್ಲಿ ಪ್ರಿಟೋರಿಯದಲ್ಲಿ ಯುದ್ಧ ಕೈದಿಯಾಗಿದ್ದು ಸೆರೆಯಿಂದ ತಪ್ಪಿಸಿಕೊಂಡರು (1899). ಈ ಯುದ್ಧವನ್ನು ಕೊನೆಗಳಿಸುವ ಒಪ್ಪಂದಕ್ಕೆ ಸಹಿಬಿದ್ದದ್ದು ಪ್ರಿಟೋರಿಯದ ವೆಲ್ ರೋಸ್ ಭವನದಲ್ಲಿ (ಮೇ 31,1902).

	ಆಧುನಿಕ ರೀತಿಯಲ್ಲಿ ನಿರ್ಮಿತವಾಗಿರುವ ಈ ನಗರ ಅನೇಕ ಸುಂದರ ಉದ್ಯಾನಗಳಿಂದಲೂ ಉಪ್ಪರಿಗೆಯ ಪುಷ್ಟವಾಟಿಕೆಗಳಿಂದಲೂ ರಸ್ತೆಗಳ ಎರಡೂ ಬದಿಗಳ ಸಾಲು ಮರಗಳಿಂದಲೂ ಕೂಡಿ ಸುಂದರವಾಗಿದೆ. ಚರ್ಚ್‍ಬೀದಿ ಪೂರ್ವದಿಂದ ಪಶ್ಚಿಮಕ್ಕೆ ಸು. 20 ಕಿಮೀ ಸಾಗಿದೆ. ಬೋಯರ್ ಯುದ್ಧಕ್ಕೆ ಸಂಬಂಧಿಸಿದ ಹಲವು ಸ್ಮಾರಕಗಳು ಈ ನಗರದಲ್ಲಿವೆ. ಅವುಗಳ ಪೈಕಿ ವೂರ್‍ಟ್ರಿಕ್ಕರ್ ಸ್ಮಾರಕವೂ ಪಾಲ್ ಕ್ರೂಗರ್ ಹಾಗೂ ಲೂಯಿ ಬೋ	ಟಾ ಇವರ ಪ್ರತಿಮೆಗಳೂ ಮುಖ್ಯವಾದುವು. ಪಾಲ್ ಕ್ರೂಗರ್ ನ್ಯಾಯಶಾಸ್ತ್ರಜ್ಞ ಹಾಗೂ ಇತಿಹಾಸಕಾರ, ಬೋಟಾ ರಾಜಕಾರಣಿ, ನಗರದಲ್ಲಿ 19ನೆಯ ಶತಮಾನದ ಪ್ರಾಟಿಸ್ಟೆಂಟ್ ಮತ್ತು ರೋಮನ್ ಕ್ಯಾತೋಲಿಕ್ ಚರ್ಚುಗಳಿವೆ. ಪ್ರಿಟೋರಿಯ ವಿಶ್ವವಿದ್ಯಾಲಯದ ಸ್ಥಾಪನೆಯಾದ್ದು 1908ರಲ್ಲಿ; ಇಲ್ಲಿ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಪ್ರಾಣಿಸಂಗ್ರಹಾಲಯಗಳಿವೆ. ವೈದ್ಯಸಂಶೋಧನಾ ಸಂಸ್ಥೆ ಈ ನಗರದ ಅಂಚಿನಲ್ಲಿದೆ.
	

ಪ್ರಿಟೋರಿಯ ವಾಣಿಜ್ಯ ಹಾಗೂ ಕೈಗಾರಿಕೆಗಳ ನಗರ. ಇಲ್ಲಿ ಅನೇಕ ಯಂತ್ರೋಪಕರಣಗಳು ತಯಾರಾಗುತ್ತವೆ. ಪ್ರಿಟೋರಿಯ ಪ್ರಾಂತ್ಯದಲ್ಲಿ ವಜ್ರದ  ಗಣಿಗಳಿವೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ